ಮೀಡಿಯಾ ಮಿರ್ಚಿ: ‘ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ..’
-ಜಿ ಎನ್ ಮೋಹನ್
ಜಗಲಿ ಭಾಗವತರು ಅಂತ ಒಬ್ರಿದಾರೆ, ಅವರಿಗೆ ಆಗೀಗ ಮಾರುವೇಷ ಹಾಕ್ಕೊಂಡು ಬ್ಲಾಗ್ ಲೋಕದಲ್ಲಿ ಸುತ್ತಾಡೋ ಅಭ್ಯಾಸ. ಹಿಂದೆ ರಾಜ ಮಹಾರಾಜರು ಹಿಂಗೆ ವೇಷ ಬದ್ಲಾಯ್ಸಿಕೊಂಡು ಹಗಲೂ ರಾತ್ರಿ, ಅಲ್ಲಿ ಇಲ್ಲಿ ಸುತ್ತಿ ಪ್ರಜೆಗಳು ನನ್ನ ಬಗ್ಗೆ, ನನ್ನ ಆಡಳಿತದ ಬಗ್ಗೆ ಏನ್ ಮಾತಾಡ್ತಾ ಇದಾರೆ ಅಂತ ಫಸ್ಟ್ ಹ್ಯಾಂಡ್ ರಿಪೋರ್ಟ್ ತಗೊಳ್ತಾ ಇದ್ರಂತೆ. ಪಾಪ ‘ಚಪ್ಪನ್ನಾರು’ ರಾಣಿಯರನ್ನು ಹೀಗೆ ಒಂಟಿಯಾಗಿ ಬಿಟ್ಟು ಅವರಾದರೂ ಯಾಕೆ ಸುತ್ತಾಡುತ್ತಿದ್ದರೋ..ಆ ಪರಮಾತ್ಮನೇ ಬಲ್ಲ. ಜಗಲಿ ಭಾಗವತರ ಕಥೆ ಹೀಗಂತೆ ಅಂತ ಗೊತ್ತಾದ ತಕ್ಷಣ ನಂಗೂ ಎಲಾ ಇವನಾಪ್ನ!, ನಾನೂ ಒಂದು ಕೈ ಯಾಕೆ ನೋಡಬಾರದು ಅನಿಸ್ತು. ಸರಿ ವೇಷ ಬದಲಾಯ್ಸಿಕೊಳ್ಳೋದು ಹೇಗೆ ಅಂತ ತಲೆ ಕೆರಕೊಂಡೆ. ಯುರೇಕಾ..! ತಕ್ಷಣ ಬಲ್ಬ್ ಹತ್ತಿಕೊಳ್ತು . ಸಿಂಪಲ್, ಎಲ್ಲಾರೂ ನನ್ನನ್ನ ಬಾಲ್ಡಿ ಅನ್ಕೊಂಡಿದಾರೆ. ಅದನ್ನೇ ಬದಲಾಯ್ಸಿಬಿಟ್ರೆ? ಆ ಅಮೆರಿಕಾದ ಒಬಾಮನಿಗೂ ನನ್ನ ಗುರ್ತು ಸಿಗಲ್ಲ ಅಂತ ಡಿಸೈಡ್ ಮಾಡಿದೆ.
ಪ್ರಾಬ್ಲಂ ಶುರು ಆಗಿದ್ದು ಅಲ್ಲೇ, ನಾನು ಟೋಫನ್ ಹಾಕ್ಕೊಂಡು ಎಸ್ ಎಂ ಕೃಷ್ಣ ಥರಾ ಕಾಣಿಸಿದ್ರೆ ‘ಯಾಕಪ್ಪಾ ಆಸ್ಟ್ರೇಲಿಯಾ ಪ್ರಾಬ್ಲಂ ಸಾಲ್ವ್ ಮಾಡ್ಲಿಲ್ಲ’ ಅಂತ ಹಿಡಕೊಳ್ತಾರೆ. ಬ್ಯಾಡ ಬಿಡು ಸುಮ್ನೆ ದೇಶಾಂತರ ಹೋಗೋ ಥರಾ ತಲೆ ಮೇಲೆ ಶಾಲು ಹೊದ್ದುಕೊಂಡ್ರೆ ಆಯ್ತು ಅನ್ಕೊಂಡೆ. ಅರೆ…! ಹಂಗಾಗಿಬಿಟ್ರೆ ದೇವೇಗೌಡರ ಥರಾ ಕಾಣ್ತೀನಿ. ಮೊದ್ಲೇ ಲಾಯರ್ ಗಳೂ, ಬಿ ಜೆಪಿ ಯವರೂ ಗರಂ ಆಗವ್ರೆ. ನನ್ನೇ ಅವರೂ ಅಂತ ತಿಳ್ಕೊಂಡು ‘ಬ್ಯಾ, ಬ್ಲ, ಬೋ…’ ಅಂದ್ಬಿಟ್ರೆ ಅಂತ ಹೆದರಿಕೆ ಆಯ್ತು. ಅವಾಗ್ಲೇ ನಮ್ಮ ದಾವಣಗೆರೆ ಮಲ್ಲೇಶಿ ಮಂಡಕ್ಕಿ ತಿನ್ಕಂಡು ಎದುರಿಗೆ ಸಿಕ್ಕಿದ್ದು. ಲೇ, ನಿನ್ನ ಆಕಾರ ನೋಡೋ, ಆ ಅಮೇರಿಕಾ ರಿಸೆಷನ್ನೂ ಯಾವ ಪರಿಣಾಮಾನೂ ಬೀರಿಲ್ವಲ್ಲೋ, ಜೀರೋ ಬಾಡಿ, ಸಿಕ್ಸ್ ಪ್ಯಾಕ್ ಇದ್ದೋನು ದೊಡ್ಡಣ್ಣನ ಥರಾ ಆಗೊಗಿದ್ದೀಯಲ್ಲೋ, ಯಾವೋನ್ ಗುರುತು ಹಿಡೀತಾನ್ಲೆ ನಿನ್ನ’ ಅಂತ ಅವನ ‘ಬ್ರೇಕಿಂಗ್ ನ್ಯೂಸ್’ ಬುಕ್ ಹೀರೋ ತೆಪರೇಸಿ ಥರಾ ಮಾತಾಡಿದ. ಹೌದಲ್ಲಾ, ನಾನೂ ಹಂಗೆ ನಡ್ಕೊಂಡು ಹೋದರೂ ಜನ ನನ್ನ ಗುರ್ತು ಹಿಡಿಯಲ್ಲ ಅಂತ ಹೊರಟೇಬಿಟ್ಟೆ.
ನನ್ನ ಈ ಪಾದಯಾತ್ರೆ ‘ಉತ್ತಮ ಸಮಾಜಕ್ಕೋಸ್ಕರ’ ಅಂತ ಹೇಳಬೇಕು ಅಂತ ಟಿ ವಿ 9 ಕಡೆ ಮೊದ್ಲು ಹೋದೆ. ಅಲ್ಲಿ ನೋಡಿದ್ರೆ ‘ಬೌಂಡರಿ ಲೈನ್’ ನಲ್ಲಿ ಒಬ್ರು ನಿಂತಿದ್ರು. ಯಾಕ್ರಪಾ ಅಂತ ವಿಚಾರ್ಸಿದ್ರೆ ಅವ್ರು ರಜಾ ಹಾಕಿ ಹೋಗಿದ್ರಂತೆ. ಬರೋ ಅಷ್ಟೊತ್ತಿಗೆ ‘ಮಿಶ್ರಾ’ ಪ್ರತಿಕ್ರಿಯೆ ವ್ಯಕ್ತ ಆಯ್ತಂತೆ. ಅದಕ್ಕೆ ತೆಗದಿದ್ದೇ ನ್ಯೂಸ್ 9 ಗೆ ವಗಾಯ್ಸಿದ್ರಂತೆ.ಇವ್ರು ನ್ಯೂಸ್ 9 ನಲ್ಲಿರೋದು ಒಂದೇ ಬೌಂಡರಿ ಆಚೆ ಇರೋದೂ ಒಂದೇ ಅಂತ ಅಲ್ಲಿ ನಿಂತ್ಕೊಂಡವ್ರೆ ಅಂದ. ಛೆ!, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಒಬ್ರು ಕಡಿಮೆ ಆಗೋದ್ರಲ್ಲ ಅಂತ ಶಾನೇ ಬೇಜಾರು ಆಗೋಯ್ತು. ಹಂಗೆ ‘ನೇರ, ದಿಟ್ಟ, ನಿರಂತರ’ ಹೆಜ್ಜೆ ಹಾಕಿದೆ. ಅಲ್ಲಿ ನೋಡಿದ್ರೆ ‘ನೀವೆಲ್ಲಾ ಬಕೀಟು ಹಿದೀತೀರಪ್ಪಾ, ಬಕೀಟು ಹಿಡಿದೂ ಹಿಡಿದೂ ಒಳ್ಳೆ ಜಾಗಗಿಟ್ಟಿಸ್ಕೊಳ್ತೀರಾ..’ ಅಂತ 1942 ಡೈಲಾಗ್ ಕೇಳಿಸ್ತು. ಯಾರಪ್ಪಾ ಅಂತ ನೋಡಿದ್ರೆ- ‘ಎನ್ಕ್ಲೆನ’ ಶೆಟ್ರು. ರಂಗನಾಥ ಭಾರದ್ವಾಜ್, ಹಮೀದ್ ಪಾಳ್ಯ ಇಂಪೋರ್ಟ್ ಆಗಿದಾರೆ, ಶೆಟ್ರು ಎಕ್ಸ್ಪೋರ್ಟ್ ಗೆ ರೆಡಿ ಆಗಿರಬೇಕು. ಸ್ವಲ್ಪ ಕೂಲಾಗ್ಲಿ ಅನ್ಕೊಂಡು ಮಾಧವನಗರ ಎಂಟರ್ ಆದೆ. ಪಾಪ ಅಲ್ಲಿ ‘ಸುಮ್ಮನೆ ಕವಚಿ ಬಿದ್ದೋರು’ ಅನ್ನೋರೊಬ್ರು ಕುರ್ಚಿ ತುದೀನಲ್ಲಿ ಅಂಟಿದ್ರೂ ಅಂಟಿಕೊಳ್ಳದೇ ಇರೋ ಥರಾ ಕೂತಿದ್ರು. ನಾನು ‘ಜಾನೆ ತು ಜಾನೆ ನಾ’ ಫಿಲಂ ಥರಾ ‘ನಿಮ್ಮ ಕುರ್ಚಿ, ನಿಮ್ಮ ಅಂಡು’ ಸರಿಯಾಗಿ ಕೂತ್ಕೊಳ್ಳಿ ಅಂದೆ. ಅವರು ‘ಇಲ್ಲಾ ಸಾರ್ ಹಿಂಗೇ ಇರಬೇಕಂತೆ ಅಂದ್ರು, ಯಾಕ್ರೀ ಅಂದೆ. ನರೇಂದ್ರ ಹೇಳವ್ರೆ ಆರು ತಿಂಗಳು ನೀನು ಹಿಂಗೆ ಕೂತ್ಕೊಬೇಕು, ಆಮೇಲೆಳ್ತೀನಿ ಫುಲ್ ಸೀಟಾ, ಇಲ್ಲಾ ನೋ ಸೀಟಾ ಅಂದವ್ರೆ ಅಂದ್ರು. ಪಾಪ ಅಂತ ಲೊಚಗುಟ್ಟೋ ಹೊತ್ತಿಗೆ ‘ಆದ್ರೆ ನನ್ನ ಪೋಸಿಶನ್ನೇ ಬೆಟರ್ರು ಸಾರ್. ಊರೋಕ್ಕೆ ಇಷ್ಟು ಜಾಗಾನಾದ್ರು ಸಿಕ್ಕಿದೆ. ಪಾಪ, ಇಲ್ಲಿಂದ ಬಿಟ್ಟು ಹೋದ್ರಲ್ಲ- ಮಡಿಕೇರಿ, ಮಂಗಳೂರು ಅವರ ಕಥೆ ಏನು ಸಾರ್’ ಅಂದ್ರು. ತನ್ನ ಸಮಸ್ಯೆಯ ಮಧ್ಯೆಯೂ ಬೇರೆಯವರ ಕಷ್ಟಕ್ಕೆ ಕಣ್ಣೀರಿಡುವ ಇವರು ‘ಬಂಗಾರದ ಮನುಷ್ಯ’ ಅಂತ ಅನಿಸ್ತು.
ಕಸ್ತೂರಿ ಎಂಟರ್ ಮನೆ ವೈದ್ಯರೊಬ್ಬರು ಗರಂ ಆಗಿದ್ದು ಕಾಣಿಸ್ತು. ‘ವಾಟ್ ಇಸ್ ದಿ ಮ್ಯಾಟರ್?’ ಅಂತ ಶುದ್ಧ ಕನ್ನಡದಲ್ಲಿ ಕೇಳಿದೆ. ಮಿರ್ಚಿ ಎಫೆಕ್ಟೂ ಸಾರ್ ಅಂದ್ರು. ಪಾಪ ಅಸಿಡಿಟಿ ಇರ್ಬೇಕು ಆದರೂ ಮಿರ್ಚಿ ತಿನ್ತಾರಾ ಅಂದೆ. ಅಲ್ಲಾ ಸಾರ್ ಮೀಡಿಯಾ ಮಿರ್ಚಿ ತಿನ್ದ್ಬಿತ್ರು. ಅವಾಗ್ಲಿಂದ ಹಿಂಗೆ ಅಂದ್ರು. ಪಾಪ ತೇಜಸ್ವಿ ಗುಳಿಗೆ ಕೊಟ್ರೆ ಖಾಯಿಲೆ ವಾಸಿ ಆಗೋ ಬದ್ಲು ಹಿಂಗೆ ವಿಪರೀತ ಆಗೋಯ್ತಲ್ಲಾಂತ ಆಚೆ ಬಂದೆ. ಆಚೆ ಬರದೆ ಹೋಗಿದ್ರೆ ವೈದ್ಯರೇ ನನ್ನನ್ನ ಆಚೆಗೆಸೋಯೋರು. ಎದುರುಗಡೆ ಕಾಯಿನ್ ಬೂತ್ ಇತ್ತು. ಫೋನ್ ತಿರುಗಿಸಿದೆ. ಇನ್ನೂ ಹಲೋ ಹೇಳಿಲ್ಲ ಆಗ್ಲೇ ಆ ಕಡೆ ಇಂದ ‘ಸೋನಿಯಾಗಾಂಧೀಜಿ ನಮಷ್ಕಾರ್ ನಾನು ಮಾಣಿ’ ಅಂತ ದನಿ ಕೇಳಿಸ್ತು. ಎಲಾ ಇವನ ಅಂತ ಆಶ್ಚರ್ಯ ಪಟ್ಟುಕೊಂಡು ಹಂಗೆ ಕೇಳಿಸ್ಕೊಂಡು ನಿಂತ್ಕೊಂಡೆ. ‘ ನಿಮ್ಮ ಫೋನ್ ಇನ್ ಅವಶ್ಯಕಥಾ ಹೈ, ಮೆ ಈಟಿವಿ ಕಾ ಬಾಸ್ ಹೂ’ ಅಂತ. ತ್ರೀ ಈಡಿಯಟ್ಸ್ ನ ’ಬಲಾತ್ಕಾರ್’ ಭಾಷಣ ನೆನಪಿಗೆ ಬಂತು. ಜಸ್ಟ್ ತ್ರೀ ಕಾಯಿನ್ ಹಾಕಿದ್ದಕ್ಕೆ ಎಷ್ಟೊಂದು ಮಜಾ ಸಿಗುತ್ತಲ್ಲಪ್ಪಾ ಅನ್ಕೊಂಡೆ.
ಕಸ್ತೂರಿ ಇರೋದು ಆಲ್ಮೋಸ್ಟ್ ಗಾಂಧಿ ಸ್ಟ್ಯಾಚ್ಯೂ ಹತ್ರ. ಅಲ್ಲಿಂದ ನಾಲ್ಕೆಜ್ಜೆ ಹಾಕಿದ್ರೆ ಎಂ ಜಿ ರೋಡು. ಯಾಕಾಗ್ಬಾರ್ದೂ ಅಂತ ವಾಕತ್ಹಾನ್ ಮಾಡಿದೆ. ‘ತುಂಬಾ ತುಂಬಾ ಸ್ಪರ್ಧೆ ಇದೆ. ಪೇಪರ್ ಲೀಡ್ ಮಾಡೋರಿಗೆ ಕಿಲ್ಲರ್ ಇನ್ಸ್ತಿನ್ಕ್ತ್ ಇರ್ಬೇಕು. ಅಂತ ದನಿ ಕೇಳಿಸ್ತು. ಎಂ ಜಿ ರೋಡ್ ಪೇಪರ್ ಆಫೀಸ್ ನಲ್ಲಿ ಎಡಿಟೋರಿಯಲ್ ಮೀಟಿಂಗ್ ನಡೀತಾ ಇತ್ತು. ‘ಸರಿ ಸಾರ್, ನೀವು ಹೇಳಿದ್ರೆ ಈ ಕಿಟಕಿಯಿಂದ ಬೇಕಾದರೂ ಹಾರಿ ಆತ್ಮಹತ್ಯೆ ಮಾಡ್ಕೊಳ್ತೀನಿ ಸಾರ್’ ಅಂತ ದನಿ ಕೇಳಿಸ್ತು. ವಾರೆವಾ..! ಕಮಿಟ್ಮೆಂಟ್ ಅಂದ್ರೆ ಹಿಂಗಿರಬೇಕು ಅಂತ ಭೇಷ್ ಭೇಷ್ ಅನ್ನೋ ಅಷ್ಟೊತ್ತಿಗೇನೆ ‘ನಗರದಲ್ಲಿ ಇಂದು ಒಳಗೆ ಆ ನಾಗೇಶ್ ಹೆಗಡೆ ಬುಕ್ ರಿಲೀಸ್ ಕಿಲ್ ಮಾಡ್ರಿ’ ಅಂತ ಕೇಳಿಸಿತು. ಅಯ್ಯೋ! ರಾಮ ಕಿಲ್ಲರ್ ಇನ್ಸ್ತಿನ್ಕ್ತ್ ಅನ್ನೋದನ್ನ ಹಿಂಗ್ ಅರ್ಥ ಮಾಡ್ಕೊಂಡ್ಬಿಟ್ರಾ.. ಸಿಕ್ಕ ಸಿಕ್ಕಿದ್ದೆಲ್ಲಾ ಕಿಲ್ ಮಾಡಿ ಬಿಸಾಕ್ತಾವ್ರೆ ಅಂತ ಅನ್ಕೊಂಡೆ. .
ಕಾಲು ಪದಾ ಹೇಳ್ತಾ ಇತ್ತು. ಎರಡು ನಿಮಿಷ ರೆಸ್ಟ್ ಅಂತ ಅನೌನ್ಸ್ ಮಾಡ್ಕೊಂಡು ಸೈಬರ್ ಕೆಫೆ ಗೆ ಹೋದೆ. ಇನ್ನೂ ಫೇಸ್ ಬುಕ್ ಓಪನ್ ಮಾಡಿಲ್ಲ. ‘ಟನ್’ ಅಂತ ಪೇರಳೆ ಚ್ಯಾಟ್ ಗೆ ಬಂದ. ‘ಎಂಚಿನ ಸಮಾಚಾರ’ ಅಂದೆ. ಯೂನಿವರ್ಸಿಟಿಯಲ್ಲಿ ಸ್ಟ್ರೈಕ್ ಉಂಡು ಅಂದ. ಪೇರಳೆ ಹೇಳೋದ್ರಲ್ಲಿ ಯಾವಾಗ್ಲೂ ಅರ್ಧ ಗಾಸಿಪ್ಪೇ.. ಅವನು ಹೇಳಿದ್ದು ನಂಬೋದು ಕಷ್ಟ. ಅದಿರ್ಲಿ ಯಾರು ಫೆಸ್ ಬುಕ್ ಗೆ ಬಂದರೂ ಫಟ್ ಅಂತ ಈತ ಪ್ರತ್ಯಕ್ಷ ಆಗ್ತಾನಲ್ಲ ಇವನು ಆಫೀಸ್ ಕೆಲಸ ಮಾಡೋದು ಯಾವಾಗ ಅನ್ಕೊಂಡೆ. ನಾನು ಹಾಗೆ ಅಂದುಕೊಂಡಿದ್ದು ಆ ಬಾಳೆಪುಣಿಗೆ ಹೆಂಗ್ ಕೇಳಿಸ್ತೋ.. ಪ್ರೆಸ್ ಕ್ಲಬ್ ಮೆಂಬರ್ ಆಗ್ಬೇಕು ಅಂದ್ರೆ ನಿನ್ನ ಅಪಾಯಿಂಟ್ಮೆಂಟ್ ಆರ್ಡರ್ ತೋರ್ಸು ಅಂತ ಕೂತುಬಿಟ್ರು.
ಇದೇನಪ್ಪಾ ಇದು, ಎಲ್ಲಿ ಹೋದರೂ ನೆಗೆಟಿವ್ ಸುದ್ದೀನೆ ಕೇಳಿಸ್ತಾ ಇದೆಯಲ್ಲಾ ಅಂತ ಗಾಬರಿ ಆದೆ. ಅವಾಗ ಆ ದೊಡ್ಡೋರು ಹೇಳಿದ್ದು ಜ್ಞಾಪಕಕ್ಕೆ ಬಂತು. ಜರ್ನಲಿಸ್ಟ್ ಗಳ ಬ್ಲಡ್ ಗ್ರೂಪೇ ನೆಗೆಟಿವ್ ಅಂತ. ಯಾಕಪ್ಪಾ ಅಂದ್ರೆ ಯಾವಾಗಲೂ ನೆಗೆಟಿವ್ ಆಗಿ ಯೋಚನೆ ಮಾಡ್ತೀರಾ, ನೆಗೆಟಿವ್ ಸುದ್ದಿ ಬಂದ್ರೆ ಸಂತೋಷ ಪಡ್ತೀರಾ, ನೆಗೆಟಿವ್ ಸುದ್ದಿ ಬರೀತಾ ಬರೀತಾ ಕೊನೆಗೆ ನೀವೇ ನೆಗೆಟಿವ್ ಆಗಿ ಹೋಗ್ತೀರಾ ಅಂತ. ನಮ್ಮೂರಲ್ಲಿ ಹಂಗೇನಿಲ್ಲ, ಬರೀ ನೆಗೆಟಿವ್ ಅಂತ ಇಲ್ಲ, ಪಾಸಿಟಿವ್ ಆಗಿ ಯೋಚನೆ ಮಾಡೋರೂ ಇದ್ದಾರೆ.. ಕಾರ್…ಕಾರ್…ಕಾರ್ ಎಲ್ನೋಡಿ ಕಾರ್ ಅಂದೆ.
ಧಾರವಾಡದಲ್ಲಿ ನಾವು ಬಾಲು ಅಂತ ಪ್ರೀತಿಯಾಗಿ ಕರೆಯೋ ಎ ಎಸ್ ಬಾಲಸುಬ್ರಮಣ್ಯ ಇದಾರಪ್ಪ. ಮೊನ್ನೆ ತಾನೇ ಇಡೀ ರಾಜ್ಯದ ಮೀಡಿಯಾ ಸ್ಟೂಡೆಂಟ್ ಗಳನ್ನ, ಲೆಕ್ಚರರ್ ಗಳನ್ನ ಕಟ್ಟಿಕೊಂಡು ಫೆಸ್ಟಿವಲ್ ಮಾಡಿದ್ರು. ಹುಡುಗರು, ಲ್ಯಾಪಿ, ಕ್ಯಾಮೆರಾ, ಸ್ಟಾಂಡು ಹೊತ್ಕೊಂಡು ಚಟ ಪಟಾ ಅಂತ ಓಡಾಡ್ತಾ ಇದ್ರೆ ಖುಷಿ ಆಗೋದು. ಮೊನ್ನೆ ನಾಗರಾಜ್ ಮತ್ತಿಗಾರು, ಧರಣೀಶ್ ಬೂಕನಕೆರೆ ಮೀಟ್ ಆದಾಗ ತರ್ಲೆ ಗಾಸಿಪ್ ಮಾತಾಡೋ ಬದ್ಲು ಬಿ ಟಿ ಬದನೆ ಹೋರಾಟ ಆದ್ಮೇಲೆ ಬದನೆ ಕಥೆ ಏನು ಅಂತ ಚರ್ಚೆ ಮಾಡ್ತಾ ಇದ್ರು. ಆದಿತ್ಯ ಭಾರದ್ವಾಜ್ ಅನ್ನೋ ಮೀಡಿಯಾ ಸ್ಟೂಡೆಂಟ್ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ‘ಆಲೆಮನೆ’ ಅನ್ನೋ ಬ್ಲಾಗ್ ಹುಟ್ಟು ಹಾಕ್ತಾ ಇದ್ದ. ಅಶ್ವಿನಿ ಶ್ರೀಪಾದ್ ತಮ್ಮ ಬ್ಲಾಗ್ ನಲ್ಲಿ ದರಿದ್ರ ಗಿಫ್ಟ್ ಗಳು ಅಂತ ಬರೆದರು, ದಟ್ಸ್ ಕನ್ನಡದ ಶಾಮಿ- ಎಸ್ ಕೆ ಶ್ಯಾಮಸುಂದರ್ ಪುಸ್ತಕ ಬಿಡುಗಡೆ ಅಂಗಳದಲ್ಲಿ ನಿಂತು ಒಳ್ಳೆ ಥಾಟ್ಸ್ ಕೊಡ್ತಿದ್ರು. ಸುನಂದಾ ಪ್ರಕಾಶ್ ಕಡಮೆ ತಮ್ಮ ಮಗಳು ಕಾವ್ಯಾ ಗೆ ಚಾನಲ್ ಗಳಿಗಿಂತ ಪೇಪರ್ ಗಳೇ ಇಷ್ಟ ಅಂತ ಒಳ್ಳೆ ನ್ಯೂಸ್ ಕೊಟ್ರು ಇದೆಲ್ಲಾ ಪಾಸಿಟಿವ್ ಆಲ್ವಾ ಅಂತ ಅಂತರ್ ಆತ್ಮ ಹೇಳ್ತಿದ್ದಾಗ ಈ ತರ್ಲೆ ತೆಪರೇಸಿ ಸುಘೋಷ್ ನಿಗಳೆಗೆ ಮಗು ಹುಟ್ಟಿದ್ದು, ಗುರುಸ್ವಾಮಿ ಹೊಳೀಮಠ ಎರಡನೇ ಬಾರಿ ಅಪ್ಪ ಆಗೋಕ್ಕೆ ರೆಡಿ ಆಗಿರೋದು, ಇನ್ಫಾರ್ಮೇಶನ್ ಆಫೀಸರ್ ಎ ಆರ್ ಪ್ರಕಾಶ್ ಮನೆ ಕಟ್ಟಿರೋದು ಪಾಸಿಟಿವ್ ನ್ಯೂಸ್ ಅಲ್ವ ಅಂತ ತಲೆ ಹಾಕಿದ.
ಸುಮ್ನೆ ಕೂತರೆ ಮನಸ್ಸಿಗೆ ಭೂತ ಹೊಕ್ಕುತ್ತೆ ಅನ್ನೋ ಎಸ್ ಷಡಾಕ್ಷರಿ ಅವರ ಅಣಿಮುತ್ತು ಜ್ಞಾಪಕಕ್ಕೆ ಬಂತು. ಸದಾನಂದ ಮಯ್ಯ ಅವರ ಊಟದ ಕಾಲಮ್ಮೂ ನೆನಪಿಗೆ ಬಂತು. ಸರಿ ಊಟಾನಾದ್ರೂ ಮಾಡೋಣ ಅಂತ ಪ್ರೆಸ್ ಕ್ಲಬ್ ಎಂಟರ್ ಆದೆ. ಏನಾಶ್ಚರ್ಯ. ‘ರತ್ನನ್ ಪರ್ಪಂಚ’ ದ ಬಾಗಿಲು ತೆರೀತಾ ಇದ್ದ ಹಾಗೇನೆ ಜ್ಞಾನೋದಯ ಆಯ್ತು. ಇಷ್ಟು ಹೊತ್ತು ನಾನು ಬೆಂಗಳೂರಿನ ಬೀದಿ ಬೀದಿ ಅಲೆದಿದ್ದು ನಶೇನಲ್ಲಿ. ಕೇಳಿಸಿದ್ದು ಕಾಣಿಸಿದ್ದು ಶುದ್ಧ ಸುಳ್ಳು ಅಂತ. ಅಷ್ಟರಲ್ಲಿ ಆನಂದ ’ವಾರೆನೋಟ’ ಬೀರ್ತಾ ಬಂದ್ರು. ‘ಪರವಾಗಿಲ್ಲ ಕಣ್ರೀ ನನ್ನ ಗರಡೀಲಿ ಇದ್ದಿದ್ದಕ್ಕೆ ನಿಮಗೂ ವಾರೆನೋಟ ಬಂದಿದೆ ಅಂದ್ರು. ವಾರೆ ವಾರೆಯಾಗಿ ನಕ್ಕೆ.
ಬುಕ್ ಟಾಕ್
ಪತ್ರಕರ್ತನೊಬ್ಬನಿಗೆ ಪಾಸಿಟಿವ್ ನೋಟವಿದ್ದರೆ ಆಗುವ ಲಾಭಕ್ಕೆ ‘ಕಾಡು ಮಾವು’ ಒಳ್ಳೆಯ ಉದಾಹರಣೆ. ಅಡಿಕೆ ಪತ್ರಿಕೆ ಸದ್ದಿಲ್ಲದೆ ಸಮಾಜಮುಖಿ ಸೇವೆಗೆ ನಿಂತಿದೆ. ಈ ಪತ್ರಿಕೆಯ ಸಹಾಯಕ ಸಂಪಾದಕ ನಾ ಕಾರಂತ ಪೆರಾಜೆ. ನಾಡಿನ ಉದ್ದಗಲಕ್ಕೂ ಸುತ್ತಾಡಿದ ಇವರು ಯಶಸ್ಸು ಗಳಿಸಿ ಮಾದರಿಯಾದ ರೈತರ ಬಗ್ಗೆ ಬರೆದಿದ್ದಾರೆ. ಆ ಬರಹಗಳ ಸಂಕಲನವೇ ಕಾಡು ಮಾವು. ಕಾರಂತರು ಪತ್ರಿಕೋದ್ಯಮದ ಒಳ ಹೊರಗು ಬಲ್ಲವರು. ಅದಕ್ಕೆ ಇಲ್ಲಿರುವ ಲೇಖನಗಳೇ ಸಾಕ್ಷಿ ಎನ್ನುತ್ತಾರೆ ಮುನ್ನುಡಿಯಲ್ಲಿ ಶಿವರಾಮ ಪೈಲೂರು. ಪುತ್ತೂರಿನ ಕೊಡೆ0ಕಿರಿ ಪ್ರಕಾಶನ ಈ ಕೃತಿ ಪ್ರಕಟಿಸಿದೆ
ಕೆಂಪ್ ಮೆಣಸಿನ್ಕಾಯ್
ಪೆನ್ನು ಹಾಗೂ ಪಿನ್ನು ಎರಡರ ಬಗ್ಗೆಯೂ ಎಚ್ಚರದಿಂದಿರಬೇಕು ಅಂತ ಬರೆದಿದ್ದಾರೆ ನಾಗೇಶ ಹೆಗಡೆ. ಪಿನ್ನು ಮಾಡಿದ ಕೆಲಸವನ್ನೇ ಹೊಗಳುವ ಪೆನ್ನೂ ಮಾಡುತ್ತದೆ ಅಂತ ಅವರ ಬಲವಾದ ನಂಬಿಕೆ. ಹಾಗೆ ಅವರು ಗರಂ ಆಗಿ ಬರೆದದ್ದು ಕಳೆದ ಬಾರಿ ಮೀಡಿಯಾ ಮಿರ್ಚಿ ಯಲ್ಲಿ ಅವರನ್ನು ಹೊಗಳಿದ್ದಕ್ಕಾಗಿ. ಬೈದಾಗ ಬೈದವರನ್ನು ನೋಡಿದ್ದೇವೆ. ಹೊಗಳಿದಾಗಲೂ ಬೈದವರು ಇವರೊಬ್ಬರೇ. ಅದಕ್ಕೆ ಅವರು – ನಾಗೇಶ್ ಹೆಗಡೆ…
‘ಶೃತಿ’ ಪದಕ್ಕೆ cooked ಅಂತ ಅರ್ಥ
-ಸುನಾಥ
ಅಡುಗೆಯ ಸ್ಟೋ, ಸೈಕಲ್ ಅಥವಾ ಮತ್ಯಾವುದೇ ಚಿಕ್ಕಪುಟ್ಟ ಯಂತ್ರೋಪಕರಣಗಳನ್ನು ರಿಪೇರಿ ಮಾಡಿಸಲು ಒಯ್ದಾಗ, ರಿಪೇರಿ ಮಾಡುವವನು , “ಇದರ ‘ವ್ಹಾಯ್ಸರ್’ ಹೋಗೇದರಿ; ಬ್ಯಾರೆ ವ್ಹಾಯ್ಸರ್ ಹಾಕಿಕೊಡ್ತೇನಿ”, ಎಂದು ಹೇಳುವದನ್ನು ನೀವು ಕೇಳಿರಬಹುದು. ಈ ‘ವ್ಹಾಯ್ಸರ್’ ಅನ್ನೋದು ನಿಜವಾಗಿಯೂ washer ಅನ್ನುವ ಆಂಗ್ಲ ಪದದ ಅಪಭ್ರಂಶ. ರಿಪೇರಿ ಮಾಡುವವನಿಗೆ ‘ವಾಶರ್’ ಅನ್ನೋದು ಸಾಕಷ್ಟು ಇಂಗ್ಲಿಶ್ ಅನ್ನಿಸುತ್ತಿರಲಿಕ್ಕಿಲ್ಲ. ಆಂಗ್ಲ ಪದವನ್ನು ಮತ್ತಷ್ಟು ಆಂಗ್ಲೀಕರಣ ಮಾಡುವ ಉದ್ದೇಶದಿಂದ ಆತ ‘ವಾಶರ್’ಅನ್ನು ‘ವ್ಹಾಯ್ಸರ್’ ಮಾಡಿದ್ದಾನೆ.
ಆಂಗ್ಲ ಪದಗಳನ್ನು ಇನ್ನಷ್ಟು ಆಂಗ್ಲೀಕರಿಸುವಂತೆಯೇ ಸಂಸ್ಕೃತ ಪದಗಳನ್ನು ಇನ್ನಷ್ಟು ಸಂಸ್ಕೃತೀಕರಿಸುವದರಲ್ಲಿಯೂ ನಮ್ಮವರಿಗೆ ಅಂದರೆ ಕನ್ನಡಿಗರಿಗೆ ತುಂಬಾ ಪ್ರೀತಿ ಹಾಗು ಅಪರಿಮಿತ ಕೌಶಲ್ಯ.
ಅದರಲ್ಲಿಯೂ ನಮ್ಮ ಕನ್ನಡ ಚಿತ್ರನಿರ್ಮಾಪಕರ ಕೈಯಲ್ಲಿ ಸಿಕ್ಕ ಪದಗಳ ಗೋಳನ್ನಂತೂ ಕೇಳುವದೇ ಬೇಡ.
ದ್ವಾರಕೀಶರು ‘ಗಿರಿಜಾ’ ಎನ್ನುವ ಯುವತಿಯನ್ನು ಚಿತ್ರೋದ್ಯಮಕ್ಕೆ ಪರಿಚಯಿಸುವಾಗ ಅವಳ ಹೆಸರನ್ನು ಬದಲಾಯಿಸಿ ‘ಶೃತಿ’ ಎಂದು ಕರೆದರು. ‘ಶೃತಿ’ ಪದಕ್ಕೆ cooked, boiled, dressed ಎನ್ನುವ ಅರ್ಥವಿದೆ. ‘ಶ್ರುತಿ’ ಪದಕ್ಕೆ ವೇದ, ಉಪನಿಷತ್ತು ಹಾಗು ಸಂಗೀತದ tuning ಎನ್ನುವ ಅರ್ಥವಿದೆ. ದ್ವಾರಕೀಶರ ಮನಸ್ಸಿನಲ್ಲಿ ಇರುವ ಅರ್ಥ ಯಾವುದೋ ಅವರಿಗೇ ಗೊತ್ತು. (ಹೌದೆ?) ಬಹುಶ: ಅವರಿಗೆ ‘ಶ್ರುತಿ’ ಇದು ‘ಶೃತಿ’ಯಷ್ಟು ಸಂಸ್ಕೃತ ಎನ್ನಿಸಿರಲಿಕ್ಕಿಲ್ಲ. ಒಟ್ಟಿನಲ್ಲಿ ದ್ವಾರಕೀಶರ ಕೈಯಲ್ಲಿ ಸಿಕ್ಕ ಗಿರಿಜಾ ಸಂಗೀತದ ಶ್ರುತಿಯಾಗುವ ಬದಲು ಬೇಯಿಸಿದ ಕೋಳಿಯಾಗಿ ಬಿಟ್ಟಳು!
ಇದರಂತೆಯೇ ‘ಧ್ರುವ’ ಪದವನ್ನು ‘ಧೃವ’ ಎಂದು, ‘ಶ್ರದ್ಧಾ’ ಪದವನ್ನು ‘ಶೃದ್ಧಾ’ ಎಂದು ಬರೆದು ಮತ್ತಷ್ಟು ಸಂಸ್ಕೃತೀಕರಿಸುವ ಒಲವು ಹಲವು ಕನ್ನಡಿಗರಲ್ಲಿದೆ.
ಚಿತ್ರನಿರ್ಮಾಪಕರೇನೋ ಭಾಷಾ-ಅಜ್ಞಾನಿಗಳಿರಬಹುದು. ಆದರೆ ನಮ್ಮ ಪತ್ರಿಕೋದ್ಯಮಿಗಳ ಕತೆ ಏನು? ಅವರೂ ಅಜ್ಞಾನಿಗಳೇ? ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಈ ಪತ್ರಿಕೆ ತನ್ನ ಸೋಮವಾರದ ಪುರವಣಿಯ ಶೀರ್ಷಿಕೆಯನ್ನು ‘ಸಿಂಧೂರ’ ಎಂದು ಢಾಳಾದ ಅಕ್ಷರಗಳಲ್ಲಿ ಮುದ್ರಿಸುತ್ತದೆ. ಸಿಂಧೂರ ಪದದ ಅರ್ಥ ‘ಆನೆ’. ಈ ಪುರವಣಿಯು ಮಹಿಳಾಪುರವಣಿ. ಮಹಿಳಾಪುರವಣಿಗೆ ‘ಸಿಂಧೂರ (=ಆನೆ)’ ಎಂದು ಕರೆಯುವ ಮೂಲಕ ಪತ್ರಿಕೆಯ ಸಂಪಾದಕರು ‘ಮಹಿಳೆಯರು ಆನೆಗಳಂತೆ’ ಎನ್ನುವ ಸಾಂಕೇತಿಕ ಅರ್ಥವನ್ನು ಸೂಚಿಸುತ್ತಿದ್ದಾರೆಯೆ? ‘ಸಿಂದೂರ’ ಎಂದರೆ ಕುಂಕುಮ. ಕುಂಕುಮಕ್ಕೂ ಭಾರತೀಯ ಮಹಿಳೆಯರಿಗೂ ಪುರಾತನ ಸಂಬಂಧವಿದೆ. ಹಾಗಿದ್ದರೆ ಮಹಿಳಾಪುರವಣಿಯನ್ನು ‘ಸಿಂದೂರ’ ಎಂದು ಕರೆಯಬೇಕಾಗಿತ್ತಲ್ಲವೆ? ಬಹುಶ: ಮಹಿಳಾ ಪುರವಣಿಯ ಅಲ್ಪಪ್ರಾಣೀಕರಣವು ಅವರಿಗೆ ‘ಅಸಂಸ್ಕೃತ’ ಎನ್ನಿಸಿರಬಹುದು! ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ಅನೇಕ ಮಹಾಪ್ರಾಣೀಕೃತ ಪದಗಳನ್ನು ಸೃಷ್ಟಿಸಿ ಸಂಸ್ಕೃತ ಶಬ್ದಕೋಶಕ್ಕೆ ಕಾಣಿಕೆಯಾಗಿ ನೀಡಿದೆ. ಉದಾಹರಣೆಗೆ: ಸರ್ವೋಚ್ಛ, ಉಚ್ಛಾರ ಇತ್ಯಾದಿ. ದುರದೃಷ್ಟವೆಂದರೆ, ಅಮಾಯಕ ಓದುಗರು, ವಿಶೇಷತಃ ಚಿಕ್ಕ ಹುಡುಗರು ಹಾಗು ವಿದ್ಯಾರ್ಥಿಗಳು ಈ ತಪ್ಪು ಪದಗಳನ್ನೇ ಸರಿಯಾದ ಪದಗಳೆಂದು ತಿಳಿದುಬಿಡುವದು.
ಸಂಯುಕ್ತ ಕರ್ನಾಟಕ ಹಾಗು ವಿಜಯ ಕರ್ನಾಟಕ ಈ ಎರಡೂ ಪತ್ರಿಕೆಗಳು ‘ಅಲ್-ಕೈದಾ’ ವನ್ನು ‘ಅಲ್-ಖೈದಾ’ ಎಂದು ಮುದ್ರಿಸುತ್ತಾರೆ. ಯಾಕೆ? ಉಗ್ರಗಾಮಿಗಳು ಅಲ್ಪಪ್ರಾಣಿಗಳಾಗಿರಲು ಸಾಧ್ಯವಿಲ್ಲವೆಂದೆ? ಹಾಗಿದ್ದರೆ ‘ಕುರ್ಬಾನಿ’ಯಂತಹ(=ತ್ಯಾಗ) ಒಳ್ಳೆಯ ಪದವನ್ನು ‘ಖುರ್ಬಾನಿ’ ಎಂದು ಯಾಕೆ ಬರೆಯುತ್ತಾರೊ ತಿಳಿಯದು!
ಹಾಗೆಂದು ಎಲ್ಲಾ ಹಿಂದಿ/ಉರ್ದು ಪದಗಳನ್ನು ಮಹಾಪ್ರಾಣೀಕರಿಸುತ್ತಾರೆ ಎನ್ನುವಂತಿಲ್ಲ. ‘ಧಾಬಾ’ ಎನ್ನುವ ಹಿಂದಿ ಪದದ ಅರ್ಥ ಹುಲ್ಲಿನ ಗುಡಿಸಲು. ಇದನ್ನು ಕನ್ನಡದಲ್ಲಿ ‘ಡಾಬಾ’ ಮಾಡಲಾಗಿದೆ! ಒಟ್ಟಿನಲ್ಲಿ, ನಮ್ಮ ಪತ್ರಿಕೆಗಳು ಒಂದು ಭಾಷೆಯ ಪದವನ್ನು ಕನ್ನಡ ಭಾಷೆಗೆ ತೆಗೆದುಕೊಳ್ಳುವಾಗ ಅಪಭ್ರಂಶ ಮಾಡಲೇಬೇಕೆನ್ನುವದನ್ನು ವ್ಯಾಕರಣದ ನಿಯಮದಂತೆ ಪರಿಪಾಲಿಸುತ್ತಿದ್ದಾರೆ.
ಸಂಯುಕ್ತ ಕರ್ನಾಟಕ ಪತ್ರಿಕೆಯು ಮಾಡುತ್ತಿರುವ ಭಾಷಾದೋಷಗಳನ್ನು ಈ ಮೊದಲೇ ನಾನು ಇಲ್ಲಿ, ಹಾಗು ಇಲ್ಲಿ ತೋರಿಸಿದ್ದೇನೆ. ವಿಜಯ ಕರ್ನಾಟಕ ಪತ್ರಿಕೆಯೂ ಸಹ ಈ ವಿಷಯದಲ್ಲಿ ಹಿಂದೆ ಬೀಳಲು ಸುತರಾಮ್ ತಯಾರಿಲ್ಲ! ವಿಜಯ ಕರ್ನಾಟಕ ಪತ್ರಿಕೆಯ ‘ಪದೋನ್ನತಿ’ ಎನ್ನುವ ಸ್ಥಿರ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾಗುವ ಮಾಹಿತಿಯು ಸಹ ತಪ್ಪಿನಿಂದ ಕೂಡಿರುತ್ತದೆ. ದಿ:೧೯ ಜನೆವರಿಯಂದು ಪ್ರಕಟವಾದ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇನೆ:
‘ಶೀತ್ನಿ’ ಪದದ ಅರ್ಥ ‘ಸೀ ತೆನೆ’. ‘ಸೀ ತೆನೆ’ಗೆ ‘ಬೆಳಸಿ’ ಎಂದೂ ಕರೆಯುತ್ತಾರೆ, ‘ಹಾಲು ತೆನೆ’ ಎಂದೂ ಕರೆಯುತ್ತಾರೆ. ಜೋಳದ ಬೆಳೆಗೆ ತೆನೆ ಬಿಟ್ಟಾಗ, ಈ ತೆನೆಯು ಇನ್ನೂ ಬಲಿಯದೆ ಇದ್ದಾಗ, ಇದನ್ನು ಹಾಗೇ ತಿನ್ನಬಹುದು. ಆ ಕಾರಣಕ್ಕಾಗಿಯೇ ಇದಕ್ಕೆ ‘ಸೀ ತೆನೆ’, sweet corn ಎಂದು ಕರೆಯುವದು. ವಿಜಯ ಕರ್ನಾಟಕದ ‘ಪದೋನ್ನತಿ’ಯ ಪಂಡಿತರಿಗೆ ಇದು ಚಾದಂಗಡಿಯಲ್ಲಿ ದೊರೆಯುವ ‘ಸಿಹಿ ತಿನಿಸು’ ತರಹ ಕಂಡಿದ್ದು ಆಶ್ಚರ್ಯಕರವಾಗಿದೆ!
………………………………………………………………..
ಕನ್ನಡಿಗರು ವ್ಯಾಕರಣದ ನಿಯಮಗಳನ್ನು ನಾಲಿಗೆಗೆ ಅನುಕೂಲವಾಗುವಂತೆ ಹೊಂದಿಸಿಕೊಳ್ಳುವದರಲ್ಲಿ ನಿಸ್ಸೀಮರು. ‘ಹೆಣ್ಣು ಕೂಸು’ ಎನ್ನುವ ಜೋಡು ಪದವು ಮೊದಲು ‘ಹೆಂಗೂಸು’ ಆಗಿ, ಬಳಿಕ ‘ಹೆಂಗಸು’ ಆಯಿತು. ಅದರತೆಯೇ, ‘ಗಂಡು ಕೂಸು’ ಪದವು ‘ಗಂಡಸು’ ಆಯಿತು. ಇದರಿಂದ ಉಚ್ಚಾರ ಸುಲಭವಾಯಿತು. ಆದರೆ ವ್ಯಾಕರಣಕ್ಕೇನೂ ಭಂಗ ಬರಲಿಲ್ಲ. ಇದೇ ಮಾತನ್ನು ‘ಆಕಳು’ ಪದಕ್ಕೆ ಹೇಳುವಂತಿಲ್ಲ. ‘ಆವು’ ಪದದ ಬಹುವಚನ ‘ಆವುಗಳು’. ಇದೇ ಕಾಲಾಂತರದಲ್ಲಿ ‘ಆಕಳು’ ಆಗಿದೆ. ಆದುದರಿಂದ ‘ಆಕಳು ಬಂದಿದೆ’ ಎಂದು ಹೇಳುವದು ಸರಿಯಲ್ಲ. ಇದು ‘ಆವು ಬಂದಿದೆ’ , ಅಥವಾ ‘ಆಕಳು ಬಂದಿವೆ’ ಎಂದು ಇರಬೇಕು!
ಕೆಲವೊಂದು ರೂಪಾಂತರಗಳಂತೂ ವಿನೋದವನ್ನು ಹುಟ್ಟಿಸುವಂತಿವೆ. ಬೀದರ ಜಿಲ್ಲೆಯಲ್ಲಿ ‘ಹುಡುಗಿ’ ಎನ್ನುವ ಊರಿದೆ. ಈ ಊರಿಗೆ ಹೋಗಬಯಸುವ ಬಸ್ ಪ್ರಯಾಣಿಕರು ನಿರ್ವಾಹಕನಿಗೆ “ಒಂದು ಹುಡುಗಿ ಕೊಡಪ್ಪಾ” ಎಂದು ಚೇಷ್ಟೆ ಮಾಡುವದು ಸಾಮಾನ್ಯವಾಗಿದೆ. ಹುಡುಗಿ ಪದದ ಮೂಲರೂಪ ‘ಪುದುಗಿ’. ‘ಪುದು’ ಇದರ ಅರ್ಥ ಹೊಸದಾದದ್ದು.
‘ಪುದು’=new ;`ಗಿ’=habitat.
ಹುಡುಗಿ=ಪುದುಗಿ= new habitat=ಹೊಸೂರು.
ತಮಿಳಿನಲ್ಲಿ ಹುಡುಗಿ ಅಥವಾ ಪುದುಗಿ ಎನ್ನುವ ಪದಕ್ಕೆ ಸಮಾನವಾದ ಪದ=ಪುದುಚೆರಿ.
ಇಲ್ಲಿಯೂ ಸಹ ಪುದು=ಹೊಸ ಹಾಗೂ ಚೆರಿ=ಊರು.
ಅದರಂತೆಯೇ ಹೊಸದಾಗಿ ಜನ್ಮ ಪಡೆದ ಕೂಸು ಪುದುಕ ಅಥವಾ ಪುದುಕಿಯಾಯಿತು. ಈ ಪದಗಳೇ ಕಾಲಾಂತರದಲ್ಲಿ ‘ಹುಡುಗ’, ‘ಹುಡುಗಿ’ ಎಂದು ಮಾರ್ಪಾಡಾಗಿವೆ.
ಪುದು ಪದಕ್ಕೆ ವಿರುದ್ಧವಾದದ್ದು ಮುದು ಎನ್ನುವ ಪದ. ಮುದು=old. ಈ ಪದದಿಂದಲೇ ಮುದುಕ, ಮುದುಕಿ ಎನ್ನುವ ಪದಗಳು ಬಂದಿವೆ. ಮುದಗಲ್ಲು ಎನ್ನುವ ಊರಿನ ಅರ್ಥ ಹಳೆಯ ಊರು. ಇದಕ್ಕೆ ಸಮಾನವಾದ ಮತ್ತೊಂದು ಕನ್ನಡ ಪದ ಹಳೇಬೀಡು.
ಕನ್ನಡ ನುಡಿಯಲ್ಲಿ ‘ಪ’ಕಾರವು ‘ಹ’ಕಾರವಾಗಿ ಮಾರ್ಪಟ್ಟಿದ್ದರಿಂದ ಅನೇಕ ಪದಗಳ ಉಚ್ಚಾರಗಳು ಬದಲಾದವು. ಉದಾಹರಣೆಗೆ ‘ಪಾವು’ ಪದವು ‘ಹಾವು’ ಎಂದು ಬದಲಾಯಿತು ; ‘ಪಣ್ಣು’ ಪದವು ‘ಹಣ್ಣಾ’ಯಿತು; ‘ಪೆಣ್ಣು’ ‘ಹೆಣ್ಣಾ’ದಳು. ಸಂಸ್ಕೃತದ ‘ಪರ್ವ’ವು ಕನ್ನಡದಲ್ಲಿ ‘ಹಬ್ಬ’ವಾಯಿತು. ಆದರೆ ‘ಪೆಂಟಿ’ ಎನ್ನುವ ಪದವು ‘ಹೆಂಟಿ’ಯಾಗಿ ಬದಲಾದಾಗ, ರೂಪಾಂತರದೊಡನೆ ಅರ್ಥಾಂತರವೂ ಆಯಿತು. ಬೆಲ್ಲದ ಗಟ್ಟಿಗೆ ಬೆಲ್ಲದ ಪೆಂಟಿ ಎಂದು ಕರೆಯುತ್ತೇವೆ, ಬೆಲ್ಲದ ಹೆಂಟಿ ಎಂದು ಕರೆಯುವದಿಲ್ಲ. ಹೆಂಟಿ ಪದವು ಮಣ್ಣಿನ ಗಟ್ಟಿಗೆ reserve ಆಗಿದೆ. ಇದೇ ರೀತಿಯಲ್ಲಿ ಗೆಳತಿ ಪದವು ಕೆಳದಿ ಪದದಿಂದಲೇ ಬಂದಿದ್ದರೂ ಸಹ ಅರ್ಥಗಳಲ್ಲಿ ಅಜಗಜಾಂತರವಿದೆ.
ಅದರಂತೆ, ತ ಮತ್ತು ದ ಧ್ವನಿಗಳು ಬದಲಾಗಬಲ್ಲ ಧ್ವನಿಗಳಾದರೂ ಸಹ (ಉದಾಹರಣೆ: ಹುಲಿಯ ತೊಗಲು=ಹುಲಿದೊಗಲು), ತಣಿವು ಮತ್ತು ದಣಿವು ಈ ಪದಗಳು ಅರ್ಥದಲ್ಲಿ ಪೂರ್ಣ ವಿಭಿನ್ನವಾಗಿವೆ.
ಒಂದು ಕಾಲದಲ್ಲಿ ದ್ರಾವಿಡ ಭಾಷೆಗಳಿಗೆಲ್ಲ common ಆದ ಕೆಲವು ಪದಗಳು ಕಾಲಾಂತರದಲ್ಲಿ ಒಂದೆರಡು ಭಾಷೆಗಳಿಂದ ವಜಾ ಆಗಿಬಿಟ್ಟಿವು. ಉದಾಹರಣೆಗೆ ತುಳು ಭಾಷೆಯಲ್ಲಿಯ ‘ವಣಸ’ ಪದವನ್ನೇ ತೆಗೆದುಕೊಳ್ಳಿರಿ. ತುಳು ಭಾಷೆಯಲ್ಲಿ ‘ಊಟ ಆಯಿತೆ?’ ಎಂದು ಕೇಳಲು ‘ವಣಸ ಆಂಡಾ?’ ಎಂದು ಕೇಳುತ್ತಾರೆ. ಈ ಪದವು ಕನ್ನಡದಲ್ಲಿಯೂ ಒಮ್ಮೆ ಬಳಕೆಯಲ್ಲಿ ಇದ್ದಿರಬಹುದು. ವಣಸ ಪದದಿಂದ ವಾಣಸಿಗ ಪದ ಉತ್ಪನ್ನವಾಗಿದ್ದು, ಕನ್ನಡದಲ್ಲಿ ಅದು ‘ಬಾಣಸಿಗ’ ಎಂದು ಮಾರ್ಪಟ್ಟಿದೆ.
ಇದರಂತೆಯೇ ‘ಬಾಗಿಲು’ ಎನ್ನುವ ಪದ.
ತುಳುವಿನಲ್ಲಿ ಮನೆ ಪದಕ್ಕೆ ಇಲ್ ಎನ್ನುವ ಪದವನ್ನೇ ಇನ್ನೂ ಬಳಸುತ್ತಾರೆ. ಇಲ್ (=ಮನೆ) ಹಾಗೂ ವಾಯಿ(=ಬಾಯಿ) ಪದಗಳು ಕೂಡಿ ‘ವಾಯಿಲ್’ (=ಮನೆಯ ಬಾಯಿ) ಪದವು ಉತ್ಪನ್ನವಾಯಿತು. ವಾಯಿಲ್ ಪದವು ವಾಕಿಲ್ ಆಯಿತು. ಕಾಲಾಂತರದಲ್ಲಿ ಇದೇ ಪದವು ಬಾಗಿಲು ಎಂದು ರೂಪಾಂತರಗೊಂಡಿತು. ಅದರಂತೆ ಇಲ್ (ಮನೆ) ಹಾಗೂ ಹಿಂತು ಪದಗಳು ಕೂಡಿ ‘ಹಿಂತಿಲ್’ (=ಹಿತ್ತಲು) ಪದ ರೂಪಗೊಂಡಿದೆ. ‘ಹಿಂತಿಲು’ ಈಗ ಹಿತ್ತಲಾಗಿದೆ. ಕನ್ನಡಿಗರು ‘ಇಲ್’ ಪದದ ಬದಲಾಗಿ ‘ಮನೆ’ಗೆ ಅಂಟಿಕೊಂಡಿದ್ದರಿಂದ, ಬಾಗಿಲು, ಹಿತ್ತಲು ಇವುಗಳ ಮೂಲರೂಪಗಳು ಮಸುಕಾಗಿ ಬಿಟ್ಟಿವೆ.
ಪದಮೂಲವನ್ನು ಶೋಧಿಸುವದು ನದೀಮೂಲವನ್ನು ಶೋಧಿಸುವಷ್ಟೇ ಸಾಹಸಕರವಾಗಿದೆ!
Award to Jayan
N P Jayan, photojournalist, who now resides in Bangalore, has won the UNESCO- United Nations Girls’ Education Initiative (UNGEI) Asia Pacific Photo Contest 2009 for his photograph of Namma Makkala Dhama — a home for children infected with HIV in Bagalkot.
Jayan has been a photojournalist for the past 15 years, contributing photographs to some of the leading newspapers and magazines in India, such as The New Indian Express, The Hindu, The Madhyamam Daily, Down To Earth, Marie Claire and Malayalam Varika
Courtesy: Jude The Obscure
ಇರಲಿ, ಈಗ ಗಿಫ್ಟ್ ವಿಷಯಕ್ಕೆ ಬರೋಣ..
-ಅಶ್ವಿನಿ ಶ್ರೀಪಾದ್
ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಭಾಷೆ, ಕೋಡ್ ಅಂತ ಇರತ್ತೆ. ಅದು, ಅದೇ ವೃತ್ತಿಯಲ್ಲಿ ಇದ್ದವರಿಗೆ ಮಾತ್ರ ಗೊತ್ತಿರತ್ತೆ. ಪತ್ರಿಕೋದ್ಯಮ ಇದಕ್ಕೆ ಹೊರತಾಗಿಲ್ಲ. ನಮ್ಮಲ್ಲೂ ಸಾಕಷ್ಟು ವೃತ್ತಿ ಭಾಷೆ, ಸಂಜ್ಞೆ ಇದೆ, ಅದು ಅನುದಿನ ಬಳಕೆಯಗುತ್ತಲೇ ಇರುತ್ತದೆ.
ಇಂತಹ ಸಂಜ್ಞೆಗಳಲ್ಲಿ ಸಿ ಸಿ ಕೂಡ ಒಂದು. ತಮ್ಮ ಕೆಲಸ ಆಗಬೇಕಿದಲ್ಲಿ ತಮ್ಮ ಹಿರಿಯರಿಂದಲೋ, ರಾಜಕಾರಣಿ ಧುರಿನರಿಂದಲೋ ಇಲ್ಲ ಅಧಿಕಾರಿಗಳಿಗೆ `ಬೆಣ್ಣೆ’ ಹಚ್ಚಿ ಕೆಲಸ ಮಾಡಿಸಿಕೊಳ್ಳುವರಿಗೆ , gift ಪಡೆಯುವರಿಗೆ , ತಮಗೆ ಬೇಕಿದವರ ಬಗ್ಗೆ ದೊಡ್ಡದಾಗಿ ಲೇಖನ ಬರೆದು ಸ್ವಲ್ಪ ಜಾಸ್ತಿ ಪ್ರಚಾರ ಕೊಡುವ ಪತ್ರಕರ್ತರಿಗೆ ಸಿ ಸಿ ಅಂತಾರೆ. ಸಿ ಸಿ ಅರ್ಥ ನಂಗೆ ಗೊತ್ತಿಲ್ಲ. ಆದ್ರೆ ಅದು ಬಾರಿ ಪ್ರಚಲಿತದಲ್ಲಿದೆ.
ಇರಲಿ, ಈಗ ಗಿಫ್ಟ್ ವಿಷಯಕ್ಕೆ ಬರೋಣ. ನಾನು ವಯಕ್ತಿಕವಾಗಿ ಗಿಫ್ಟ್ ಪಡೆಯುವುದನ್ನು ಇಷ್ಟ ಪಡಲ್ಲ. ನನ್ನಂತೆ ತುಂಬಾ ಜನರು ಇದ್ದಾರೆ, ಇಲ್ಲದವರು ಇದ್ದಾರೆ. ಪತ್ರಕರ್ತರು ಮನೆ, ಸೈಟ್ ಇಂದ ಹಿಡಿದು ಬೆಲೆ ಬಾಳುವ ಪೆನ್ ಕೂಡ ಪಡೆಯುತ್ತಾರೆ. ಮೊನ್ನೆ ಕೆ ಎಸ ಎಫ್ ಸಿ ಅವ್ರು 50 ಪೂರ್ಣಗೊಂಡ ಸಂದರ್ಭದಲ್ಲಿ, ಚೌಡಯ್ಯದಲ್ಲಿ ಬಾರಿ ಬಂದಿದ್ದರು.
ಸಾಮಾನ್ಯವಾಗಿ, ಪತ್ರಕರ್ತರಿಂದ, ಆಯೋಜಕರು ಹೆಸರು, ಪತ್ರಿಕೆಯ ಹೆಸರು, ಪತ್ರಕರ್ತರ ಹೆಸರು, ಈ-ಮೇಲ್ ಹಾಗು ಫೋನ್ ನಂಬರ್ ಮುಂತಾದ ಮಾಹಿತಿಯನ್ನು ಒಂದು ಹಾಳೆಯಲ್ಲಿ ಬರೆಸಿಕೊಳ್ಳುತ್ತಾರೆ. ಇದು ಕೇವಲ, ಯಾರು ಬಂದಿದ್ದರು ಅಂತ ತಿಳಿದುಕೊಳ್ಳಲು ಅಷ್ಟೇ. ಆದರೆ, ಅಂದು ನನ್ನ ಬಳಿ ಬಂದ ವ್ಯಕ್ತಿ, ಇಂತದೆ ಹಾಳೆ ಕೊಟ್ಟು, ನನ್ನ ಹೆಸರು ಮುಂತಾದ ಮಾಹಿತಿ ಬರಿಯಲು ಕೊಟ್ಟರು. ಇನ್ನೇನು ದೂರವಾಣಿ ಸಂಖ್ಯೆ ಬರೀಬೇಕು, ಅಷ್ಟರಲ್ಲಿ ಆ ವ್ಯಕ್ತಿ, ಮೇಡಂ, ನಿಮ್ಮ ಮೊಬೈಲ್ ಸಂಖ್ಯೆ ಬರೀರಿ, ಗಿಫ್ಟ್ ಕಲಿಸಕ್ಕೆ ನಮಗೆ ಅನುಕೂಲ ಆಗತ್ತೆ ಅಂದ್ರು. ನಾನು ಮೊಬೈಲ್ ಸಂಖ್ಯೆ ಬರಿಯದೆ ಹಾಳೆ ಹಾಗೆ ಹಿಂದಿರುಗಿಸಿದೆ. ಕಾರ್ಯಕ್ರಮ ಮುಗಿಸಿ ಹೊರ ಬರುತಿದ್ದಂತೆ, ಅದೇ ವ್ಯಕ್ತಿ ಓಡೋಡಿ ಬಂದು, ಗಿಫ್ಟ್ ಪ್ಯಾಕೆಟ್ ಕೊಡಲು ಬಂದರು, ನಾನು ನಿರಾಕರಿಸಿದೆ.
ಇನ್ನೊಮ್ಮೆ ಅಶೋಕ ಹೋಟೆಲ್ ನಲ್ಲಿ ಯಾವುದೋ ಗಡಿಯಾರ ಬಿಡುಗಡೆ ಸಮಾರಂಬ ಇತ್ತು. PR ತುಂಬಾ ಜೋರಾಗಿಯೇ ಆಯೋಜಿಸಿದ್ದರು. ಯಾರೋ ಜಪಾನಿಗಳು ಅದರ ಸಿ ಈ ಓ, ಹಣದ ಕೊರತೆ ಇರಲಿಲ್ಲ. ಅತ್ತ ಗಿಫ್ಟ್ ಕೊಡ್ತಾ ಇದ್ರೂ, ನಾನು ಆಕಡೆ ಹೋಗಲಿಲ್ಲ. ಹೊರಡುವಷ್ಟರಲ್ಲಿ, ಒಬ್ಬಳು ಹುಡುಗಿ ಬಂದು ಫೈಲ್ ಕೊಟ್ಟಳು, ನಾನು ಮಾಮೂಲಿ ರಿಲೀಸ್ ಅನ್ಕೊಂಡು ಇಸ್ಕೊಂಡು ಬಂದೆ. ಆಫೀಸ್ ಬಂದು ಫೈಲ್ ತೆಗೆದು ನೋಡಿದರೆ, ಒಳಗೆ ಆ ಗಡಿಯಾರ ಕಂಪನಿಯ 1,500 rupee gift voucher! ತುಂಬಾ ಬೇಜಾರು ಆಯಿತು. ಏನು ಮಾಡಲು ಗೊತ್ತಾಗಲಿಲ್ಲ, ನಮ್ಮ ಸೆಕ್ಯೂರಿಟಿ ಅವರಿಗೆ ಕೊಟ್ಟೆ. ಅವರಿಗೆ ಖುಷಿ ಆಯಿತು.
ಇನ್ನೊಮ್ಮೆ, ಬೆಂಗಳೂರಿನ ಪ್ರತಿಷ್ಟಿತ ಇಂಜಿನಿಯರ್ ಕಾಲೇಜ್ ನಲ್ಲಿ ಯಾವುದೊ ಅಂತರಾಸ್ತ್ರಿಯ ಸಮ್ಮೇಳನ ಇತ್ತು. ನಾನು ಹಾಗು Deccan Chronicle ಶ್ರೀನಿವಾಸ್ ಇದ್ದೆವು. ಶ್ರೀನಿವಾಸ್ ಕೂಡ ನನ್ನ ಹಾಗೆ ಗಿಫ್ಟ್ ಪಡೆಯುವುದನ್ನು ವಿರೋದಿಸುವ ಪತ್ರಕರ್ತ. ಸಮ್ಮೇಳನದ ನಂತರ, ನಾನು ಹಾಗು ಶ್ರೀನಿವಾಸ್ ಇಬ್ಬರು ಅಲ್ಲಿಗೆ ಬಂದಿದ್ದ ಅತಿಥಿಯನ್ನು ಮಾತನಾಡಿಸಲು ನಿಂತೆವು.
ಆ ಕಾಲೇಜ್ ನ ಪ್ರಿನಿಸಿಪಾಲ್ ನಮ್ಮನ್ನು ನೋಡಿ, ಬ್ಯಾಗ್ ತಂದರು. ಬೇಡ ಬೇಡ ಅಂದರು ಒತಾಯ ಮಾಡ್ತಾ ಇದ್ದರು. ಕೊನೆಗೆ ಶ್ರೀನಿವಾಸ್ ಬಿರುಸಾಗಿ ಹೊರಟೆ ಹೋದ. ನಂಗೆ ಅವ್ರು ಬಿಡಲಿಲ್ಲ, ಒಂತರ ಹಿಂಸೆ. ಆ ಬ್ಯಾಗ್ ಕೊಟ್ಟರು.
ಹೊರಬಂದರೆ, ಶ್ರೀನಿವಾಸ್ ಅಲ್ಲೇ ನಿಂತಿದ್ದರು, ನನ್ನ ಗೋಳಾಟ ಅರ್ಥವಾಯ್ತು. ಕಾಲೇಜ್ ಹೊರಗೆ ಕೂತಿದ್ದ ಚಪ್ಪಲಿ ಹೊಲಿಯುವನಿಗೆ ಕೊಟ್ಟೆ. ಒಂತರ ಬೇಸರ ಆಯಿತು, ಒಬ್ಬರು ಪ್ರೊಫೆಸರ್ ಕೊಟ್ಟ ಬ್ಯಾಗ್ ಹೀಗೆ ಚಪ್ಪಲಿ ಹೊಲಿಯುವನಿಗೆ ಕೊತ್ತೆನಲ್ಲ ಅಂತ. ಶ್ರೀನಿವಾಸ್, ಬೇಸರ ಮಾಡ್ಕೋಬೇಡಿ. ದೊಡ್ಡವರು ಅರ್ಥ ಮಾಡ್ಕೊಬೇಕು. ಬೇಡ ಎಂದರು ಬಲವಂತ ಏಕೆ ಮಾಡಬೇಕು, ಹಂಗೆ ಹಿಂಗೆ ಅಂದ್ರು, ಸ್ವಲ್ಪ ಸಮಾಧಾನ ಆಯಿತು.
ಒಮ್ಮೆ ಹೀಗೆ ಬಿಡದಿ ಬಳಿ ಇರುವ Toyota company ಏನೋ ಕಾರ್ಯಕ್ರಮ ಇತ್ತು. Japan ಇಲ್ಲಿಂದ ಕಂಪನಿಯ ದೊಡ್ಡ ದೊಡ್ಡ ಅಧಿಕಾರಿಗಳು ಬಂದಿದ್ದರು. ಅದೊಂದು business assignment ಆಗಿತ್ತು. ದೊಡ್ಡ ದೊಡ್ಡ ಪತ್ರಕರ್ತರು ಬಂದಿದ್ದರು. ನನಗೋ ಈ ಮಾರುಕಟ್ಟೆ, ಶೇರು, ಸ್ಟಾಕ್ ಎಕ್ಸ್ ಚೇಂಜ್ ಅರ್ಥವಾಗದ ವಿಷಯ. ಮಿಕ ಮಿಕ ನೋಡ್ಕೊಂಡು ಕೂತಿದ್ದೆ. ಪ್ರಶ್ನೆಗಳ ಸುರಿಮಳೆ. ಒಂತರ Direct attack through questions. ಜಪಾನ್ ಅಧಿಕಾರಿಗಳು ಒಂತರ ತಡವರಿಸಿ ಉತ್ತರಿಸುತ್ತಿದ್ದರು.
ಇದ್ದಕಿದಂತೆ, ಪತ್ರಕರ್ತರ ಸಾಲಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಅಧಿಕರಿಯನ್ನುದ್ದೇಶಿಸಿ, “ನೀವು ಎಲ್ಲರಿಗು ಎಷ್ಟೊಂದು ಅನುಕೂಲ ಮಾಡಿದ್ದಿರ, ಪತ್ರಕರ್ತರಿಗೆ ಯಾಕೆ ಏನು ಮಾಡಿಲ್ಲ,” ಅಂತ ಕೇಳಿದರು. ಅಲ್ಲಿವರೆಗೆ ಅಲ್ಲಿದ್ದ ಹಿರಿಯ ಪತ್ರಕರ್ತರು ಸಿಂಹದಂತೆ ಇದ್ದವರು, ಇಲಿಯನ್ತಾದರು. ಪ್ರಶ್ನೆ ನಿಂತೇ ಹೋಯ್ತು. ಕೊನೆದಾಗಿ ಗೊತಾಗಿದ್ದೇನು ಅಂದ್ರೆ, ಆ ವ್ಯಕ್ತಿ ರಾಮನಗರದ ಲೋಕಲ್ ಪೇಪರ್ ನಲ್ಲಿ ಕೆಲಸ ಮಾಡುವ ಪತ್ರಕರ್ತ ಅಂತ.
ನಾನು ಇಷ್ಟೆಲ್ಲಾ ಹೇಳಿದರು, ಗಿಫ್ಟ್ ಪಡೆದಿಲ್ಲ ಅಂತಲ್ಲ. ತೆಗೆದುಕೊಂಡಿದ್ದೇನೆ. ಗಾಂಧಿ ಭವನದಲ್ಲಿ ವಯಸ್ಸಾದ ಮುದುಕರೊಬ್ಬರು, ಪತ್ರಿಕಾ ಗೋಷ್ಠಿ ನಂತರ, ಭಾರತದ ಭಾವುಟ ಕೊಟ್ಟರು. ಒಂದು ಮಾತನಾಡೆ, ಇಸ್ಕೊಂಡೆ. ಇನ್ನೂಮ್ಮೆ, ಆಟೋ ಚಾಲಕನ ಬಗ್ಗೆ, ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹೋಗುತಿದ್ದ ಅಂತ ಬರೆದಿದ್ದೆ. ಅವನು, ಅಲ್ಲಿಂದ ಬಂದು ಪೆನ್ ತಂದು ಕೊಟ್ಟ. ನಿರಕರಿಸುತಿದ್ದವಳಿಗೆ, ಅವನು ಇದನ್ನು ಗಿಫ್ಟ್ ಅನ್ಕೋಬೇಡಿ, ನೀವು ಇಸ್ಕೊಂದ್ರೆ ನಂಗೆ ಖುಷಿ ಆಗತ್ತೆ. ಅವನ ಪ್ರೀತಿ ಪೂರ್ವಕ ಒತ್ತಾಯಕ್ಕೆ ಮಣಿದು, ಇಸ್ಕೊಂಡೆ.
ಇದಲ್ಲದೆ, ನಾನು ಕೆಲ್ಸಕ್ಕೆ ಸೇರಿದ ಹೊಸತರಲ್ಲಿ, ಯಾವುದೋ ಕಾರ್ಯಕ್ರಮದಲ್ಲಿ, 250 ರುಪಾಯಿಯ gift vocher ಕೊಟ್ಟಿದ್ದರು, ಅದರಲ್ಲಿ ಪುಟ್ಟ ಪರ್ಸ್ ಕೂಡ ತೆಗೆದುಕೊಂಡೆ. ಇದು ಈಗಲೂ ನನ್ನ ಬಳಿ ಇದೆ. ಹರಿದು ಹೋಗಿದ್ದರು ಕೂಡ ಇದೆ. ಅದನ್ನು ನೋಡಿದಾಗಲೆಲ್ಲ guilty feelings. ಇದೆ guilty feelings ನನಗೆ ಯಾವುದೇ ಗಿಫ್ಟ್ ಪಡೆಯದಂತೆ ತಡೆಯುತ್ತಿದೆ. ಅದಕ್ಕಾಗಿ ಅದನ್ನು ಹಂಗೆ ಇತ್ಕೊಂಡಿದ್ದೇನೆ!!!!
ನಾಗೇಶ್ ಪಣತ್ತಲೆಗೆ ಬೆಳ್ಳಿ ಪದಕ
ಪತ್ರಿಕಾ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ ಅವರಿಗೆ ಪ್ರತಿಷ್ಠಿತ ಫೋಟೋಗ್ರಾಫಿಕ್ ಸೊಸೈಟಿ ಆಫ್ ಇಂಡಿಯಾದ ಬೆಳ್ಳಿ ಪದಕ ಲಭಿಸಿದೆ. ಫೋಟೋಗ್ರಾಫಿಕ್ ಸೊಸೈಟಿ ಆಫ್ ಇಂಡಿಯಾ ಘಟಕವು ಮುಂಬೈನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ 60ನೇ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜಯಕರ್ನಾಟಕ ಪತ್ರಿಕಾ ಛಾಯಾಗ್ರಾಹಕರೂ ಆಗಿರುವ ನಾಗೇಶ್ ಪಾಣತ್ತಲೆ ಅವರಿಗೆ ಪತ್ರಿಕೋದ್ಯಮ ವಿಭಾಗದಲ್ಲಿ ರಜತ ಪದಕ ದೊರೆತಿದೆ. ಕಳೆದ ವರ್ಷ ನಾಗೇಶ್ ಅವರು ಸೆರೆ ಹಿಡಿದಿದ್ದ ಚಿರತೆ ದಾಳಿಯ ಛಾಯಾಚಿತ್ರಕ್ಕೆ ಈ ಪ್ರಶಸ್ತಿ ಲಭಿಸಿದೆ. ಈ ಸ್ಪರ್ಧೆಯಲ್ಲಿ ದೇಶದ 160ಕ್ಕೂ ಹೆಚ್ಚು ಪತ್ರಿಕಾ ಛಾಯಾಗ್ರಾಹಕರು ಭಾಗವಹಿಸಿದ್ದರು.
ಈ ಹಿಂದೆ ಚೆನ್ನೈ ಫೋಟೋಗ್ರಾಫಿಕ್ ಸೊಸೈಟಿ, ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕಾ ಹಾಗೂ ಇಂಡಿಯಾ ಇಂಟರ್ನ್ಯಾಷನಲ್ ಫೋಟೋಗ್ರಾಫಿ ಕೌನ್ಸಿಲ್(ಐಐಪಿಸಿ), ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿ ಪ್ರಶಸ್ತಿ ನಾಗೇಶ್ ಅವರಿಗೆ ಲಭಿಸಿದೆ.
ಸಾಯಿನಾಥರೊಂದಿಗೆ ಒಂದು ಘಂಟೆ..
ಮಾಧ್ಯಮ ಲೋಕದ ಭಿನ್ನ ಪಯಣಿಗ ಪಿ ಸಾಯಿನಾಥ್ ಇಂದು ಮೇಫ್ಲವರ್ ಮೀಡಿಯಾ ಹೌಸ್ ನಲ್ಲಿದ್ದರು. ಸುಮಾರು ಒಂದು ಘಂಟೆ ಪತ್ರಕರ್ತರು ಹಾಗೂ ಮಾಧ್ಯಮ ಪ್ರಾಧ್ಯಾಪಕರನ್ನು ಉದ್ಧೇಶಿಸಿ ಮಾತನಾಡಿದರು. ಪೇಯ್ಡ್ ನ್ಯೂಸ್, ಬಿ ಟಿ ಬದನೆ, ರೈತರ ಆತ್ಮಹತ್ಯೆ, ಅಭಿವೃದ್ಧಿ, ಇಂದಿನ ಪತ್ರಿಕೋದ್ಯಮ ಚರ್ಚೆಗೆ ಬಂದಿತು.
ಇದೇ ಸಂದರ್ಭದಲ್ಲಿ ಮೇಫ್ಲವರ್ ಮೀಡಿಯಾ ಹೌಸ್ ರೂಪಿಸಿದ, ವಿಶ್ವೇಶ್ವರ ಭಟ್ ಅವರ ಮಾಧ್ಯಮ ಮೌಸ್ ಪ್ಯಾಡ್ ಗಳನ್ನೂ ಬಿಡುಗಡೆ ಮಾಡಿದರು.
















